ದಕ್ಷಿಣ ಆಫ್ರಿಕ ಯುದ್ಧ -
 	ಗ್ರೇಟ್ ಬ್ರಿಟನ್ನಿಗೂ ದಕ್ಷಿಣ ಆಫ್ರಿಕದ ಬೋಯರ್ ರಾಜ್ಯಗಳಾಗಿದ್ದ ದಕ್ಷಿಣ ಆಫ್ರಿಕ ಗಣರಾಜ್ಯ (ಟ್ರಾನ್ಸ್‍ವಾಲ್) ಮತ್ತು ಆರೆಂಜ್ ಫ್ರೀನ ಸ್ಟೇಟಿಗೂ 1899ರಿಂದ 1902ರ ವರೆಗೆ ನಡೆದ ಯುದ್ಧ. ಇದನ್ನು ಆಂಗ್ಲೋ-ಬೋಯರ್ ಯುದ್ಧವೆಂದೂ ಬೋಯರ್ ಯುದ್ಧವೆಂದೂ ಕರೆಯುತ್ತಾರೆ. 19ನೆಯ ಶತಮಾನದ ವೇಳೆಗೆ ಗ್ರೇಟ್ ಬ್ರಿಟನ್ ಪ್ರಪಂಚದ ಅನೇಕ ಭಾಗಗಳಲ್ಲಿ ವಸಾಹತುಗಳನ್ನು ಪಡೆದಿತ್ತು. 1815ರಲ್ಲಿ ದಕ್ಷಿಣ ಆಫ್ರಿಕದ ಕೇಪ್ ವಸಾಹತನ್ನು ಹಾಲೆಂಡಿನಿಂದ ಕೊಂಡುಕೊಂಡ ಬ್ರಿಟನ್ ಕ್ರಮೇಣ ಸಾಮ್ರಾಜ್ಯವಿಸ್ತರಣೆಯ ನೀತಿಯನ್ನನುಸರಿಸಿತು. 1894ರ ವೇಳೆಗೆ ಗ್ರೇಟ್ ಬ್ರಿಟನ್, ದಕ್ಷಿಣ ಆಫ್ರಿಕದ ಬಸೂಟೊ ಲ್ಯಾಂಡ್, ಸ್ವಾಜಿಲ್ಯಾಂಡ್, ರೋಡೀಷಿಯ ಮುಂತಾದುವುಗಳ ಮೇಲೆ ಸ್ವಾಮ್ಯ ಪಡೆಯಿತು.

	ಗ್ರೇಟ್ ಬ್ರಿಟನ್ ಕೊಂಡ ಕೇಪ್ ವಸಾಹತಿನಲ್ಲಿದ್ದ ಬೋಯರ್ ಜನರು (ಡಚ್ ಮೂಲದವರು) ಬ್ರಿಟಿಷರ ಆಗಮನದಿಂದ ಅಸಮಾಧಾನಗೊಂಡರಲ್ಲದೆ ಅವರ ಅಧಿಕಾರವನ್ನು ಧಿಕ್ಕರಿಸಿದರು. ಅವರು ಕೇಪ್ ವಸಾಹತನ್ನು ಬಿಟ್ಟು ಬೇರೆ ಸ್ಥಳಗಳಿಗೆ 1836ರಲ್ಲಿ ವಲಸೆ ಹೋಗಲು ಪ್ರಾರಂಭಿಸಿದರು.

	ಇವರಲ್ಲಿ ಕೆಲವರು ಆರೆಂಜ್ ನದಿಯ ಹತ್ತಿರವೂ ಮತ್ತೆ ಕೆಲವರು ವಾಲ್ ನದಿಯ ಆಚೆಗೂ ಹೋಗಿ ನೆಲಸಿದರು. ಅಲ್ಲಿ ಅವರು ನಟಾಲ್ ಎಂಬ ಹೊಸ ಪ್ರದೇಶವನ್ನು ಕಟ್ಟಿದರು. ಬ್ರಿಟಿಷರು ಬೋಯರ್ ಜನರನ್ನು ಹಿಂಬಾಲಿಸಿ ನಟಾಲನ್ನು ಅವರಿಂದ ವಶಪಡಿಸಿಕೊಂಡರು. ಬೋಯರ್ ಜನರು ಅದನ್ನೂ ಬಿಡಬೇಕಾಯಿತು. ಅವರು ಆರೆಂಜ್ ನದಿಯ ಆಚೆಯ ದಡದಲ್ಲಿ ಆರೆಂಜ್ ಫ್ರೀ ಸ್ಟೇಟ್ ಮತ್ತು ವಾಲ್ ನದಿಯ ಆಚೆಗೆ ಟ್ರಾನ್ಸ್‍ವಾಲ್ ಎಂಬ ಹೊಸ ಪ್ರದೇಶಗಳನ್ನು ಸ್ಥಾಪಿಸಿ, ಅಲ್ಲಿ ನೆಲೆಸಿದರು. ಇಂಗ್ಲೆಂಡ್ ಇವೆರಡೂ ರಾಜ್ಯಗಳನ್ನು ಮಾನ್ಯ ಮಾಡಿತು. ಆರೆಂಜ್ ಫ್ರೀ ಸ್ಟೇಟ್, ಟ್ರಾನ್ಸ್‍ವಾಲ್‍ಗಳು ಬೋಯರ್ ಗಣರಾಜ್ಯಗಳಾದವು.

	1871ರಲ್ಲಿ ಆರೆಂಜ್ ಫ್ರೀ ಸ್ಟೇಟಿನ ಕಿಂಬರ್ಲಿಯಲ್ಲಿ ವಜ್ರ ದೊರಕಿದ ಕೂಡಲೆ ಬ್ರಿಟಿಷರು ಆ ಪ್ರದೇಶದ ಕಡೆಗೆ ತಮ್ಮ ಗಮನ ಹರಿಸಿದರು. ಆ ಪ್ರದೇಶಗಳನ್ನು ಬೋಯರ್ ಜನರು ಬ್ರಿಟಿಷರಿಗೆ ಬಿಟ್ಟುಕೊಡಬೇಕಾಯಿತು. ವಜ್ರದ ಗಣಿಗಳು ದೊರಕಿದ್ದರಿಂದ ಕೇಪ್ ವಸಾಹತು ಅಭಿವೃದ್ಧಿಗೊಂಡಿತಲ್ಲದೆ ಅಲ್ಲಿಗೆ ಸಹಸ್ರಾರು ವಿದೇಶೀಯರು ಬರಲಾರಂಭಿಸಿದರು.

	ಈ ಮಧ್ಯೆ ಆರೆಂಜ್ ಫ್ರೀ ಸ್ಟೇಟಿನ ಮೂಲನಿವಾಸಿಗಳಾದ ಜೂಲೂ ಜನಾಂಗದವರು ಬೋಯರ್ ಜನರಿಗೆ ತೊಂದರೆ ಉಂಟುಮಾಡಿದರು. ಜೂಲೂ ನಾಯಕ ಕೆಟವಾಯೋ 40,000 ಸೈನಿಕರೊಡಗೂಡಿ ಟ್ರಾನ್ಸ್‍ವಾಲಿನ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ. ಬೋಯರ್ ಗಣರಾಜ್ಯ ಕೆಟವಾಯೋನ ದಾಳಿಯನ್ನು ಹಿಮ್ಮೆಟ್ಟಿಸುವಷ್ಟು ಸಮರ್ಥವಾಗಿರಲಿಲ್ಲ. ಆದ್ದರಿಂದ ಬೋಯರ್ ಜನರಿಗೆ ಬ್ರಿಟಿಷರ ಸಹಾಯ ಅನಿವಾರ್ಯವಾಯಿತು. ದಕ್ಷಿಣ ಆಫ್ರಿಕದ ಬಿಳಿ ಜನಾಂಗದವರಿಗೆ ಉಂಟಾಗಬಹುದಾಗಿದ್ದ ತೊಂದರೆಯನ್ನು ತಪ್ಪಿಸುವ ಉದ್ದೇಶದಿಂದ ಮತ್ತೆ 1877ರಲ್ಲಿ ಬ್ರಿಟನ್ ಟ್ರಾನ್ಸ್‍ವಾಲನ್ನು ವಶಪಡಿಸಿಕೊಂಡಿತು. 1879ರಲ್ಲಿ ಉಲುಂದಿ ಎಂಬಲ್ಲಿ ಬ್ರಿಟಿಷರು ಜûೂಲೂಗಳನ್ನು ಸೋಲಿಸಿದರು. ಈ ಯುದ್ಧದಲ್ಲಿ ಬ್ರಿಟಿಷರಿಗೆ ಹೆಚ್ಚಿನ ಸಾವುನೋವುಗಳುಂಟಾದುವು.

	ಒಂದನೆಯ ಯುದ್ಧ: ಬ್ರಿಟಿಷರು ಮತ್ತೆ ಟ್ರಾನ್ಸ್‍ವಾಲನ್ನು ಸ್ವಾಧೀನಪಡಿಸಿಕೊಂಡಿದ್ದರಿಂದ ಬೋಯರ್ ಜನರು ಅತೃಪ್ತಿಯಿಂದ ಕುಡಿಯುತ್ತಿದ್ದರು. ಜûೂಲೂ ಜನರೊಡನೆ ಯುದ್ಧ ಕೊನೆಗೊಂಡರೂ ಬೋಯರ್ ಜನರಿಗೆ ಸ್ವಯಮಾಡಳಿತ ನೀಡಲು ಬ್ರಿಟಿಷರು ನಿರಾಕರಿಸಿದರು. ಆದ್ದರಿಂದ ಬೋಯರ್ ಜನರು ಬ್ರಿಟಿಷರೊಡನೆ ಹೋರಾಡಲು ನಿರ್ಧರಿಸಿದರು. ಪ್ರಿಟೋರಿಯಸ್, ಜûೂಬರ್ಟ್, ಮತ್ತು ಪಾಲ್ ಕ್ರೂಗರರ ನಾಯಕತ್ವದಲ್ಲಿ ಬೋಯರ್ ಜನರು ಬ್ರಿಟಿಷರ ಮೇಲೆ ಅನಿರೀಕ್ಷಿತ ದಾಳಿ ನಡೆಸಿದರು. ಮಜುಬಹಿಲ್ ಎಂಬಲ್ಲಿ 1881ರ ಫೆಬ್ರವರಿ 27ರಂದು ಬೋಯರ್ ಸೈನ್ಯಗಳು ಬ್ರಿಟಿಷ್ ಪಡೆಗಳನ್ನು ಸೋಲಿಸಿದುವು. ಕೂಡಲೇ ಬ್ರಿಟನ್ನಿನ ಪ್ರಧಾನಿ ಗ್ಲ್ಯಾಡ್‍ಸ್ಟನ್ ಬೋಯರ್ ಜನರ ಅಭಿಪ್ರಾಯಕ್ಕೆ ಮಾನ್ಯತೆ ನೀಡಿ, 1881ರ ಆಗಸ್ಟ್ ತಿಂಗಳಲ್ಲಿ ಶಾಂತಿ ಒಪ್ಪಂದ ಮಾಡಿಕೊಂಡ. 1884ರಲ್ಲಿ ಟ್ರಾನ್ಸ್‍ವಾಲ್ ಮತ್ತೆ ಸ್ವತಂತ್ರವಾಯಿತು.

	ಈ ಮಧ್ಯೆ ದಕ್ಷಿಣ ಆಫ್ರಿಕದ ರಾಜಕೀಯ ರಂಗದಲ್ಲಿ ಪಾಲ್ ಕ್ರೂಗರ್ ಮತ್ತು ಸಿಸಿಲ್ ರೋಡ್ಸ್ ಪ್ರಬಲರಾದರು. ಬೋಯರ್ ರೈತನೊಬ್ಬನ ಮಗನಾದ ಪಾಲ್ ಕ್ರೂಗರ್ ಸಮರ್ಥ ಹಾಗೂ ಬಲಶಾಲಿ ವ್ಯಕ್ತಿಯಾಗಿದ್ದ. 1883ರ ವೇಳೆಗೆ ದಕ್ಷಿಣ ಆಫ್ರಿಕ ಗಣರಾಜ್ಯದ ಅತ್ಯಂತ ಪ್ರಮುಖ ಮತ್ತು ಪ್ರಭಾವಶಾಲಿ ವ್ಯಕ್ತಿಯೆನಿಸಿಕೊಂಡನಲ್ಲದೆ, ಅದರ ಅಧ್ಯಕ್ಷನೂ ಆದ. ದಕ್ಷಿಣ ಆಫ್ರಿಕದಲ್ಲಿ ವಿಶಾಲ ಬೋಯರ್ ಸಾಮ್ರಾಜ್ಯವೊಂದನ್ನು ಸ್ಥಾಪಿಸುವುದು ಕ್ರೂಗರನ ಜೀವನದ ಪರಮ ಗುರಿಯಾಗಿತ್ತು.

	ಬ್ರಿಟಿಷ್ ಪ್ರಜೆಯಾಗಿದ್ದ ಸಿಸಿಲ್ ರೋಡ್ಸ್ ವಜ್ರದ ವ್ಯಾಪಾರದಲ್ಲಿ ಅಪಾರ ಸಂಪತ್ತು ಗಳಿಸಿದ್ದ. ಬ್ರಿಟಿಷ್ ದಕ್ಷಿಣ ಆಫ್ರಿಕ ಕಂಪನಿಯ ಮುಖ್ಯಸ್ಥನಾಗಿದ್ದ. ಸಿಸಿಲ್ ರೋಡ್ಸ್ ಪಕ್ಕಾ ಸಾಮ್ರಾಜ್ಯವಾದಿಯಾಗಿದ್ದ. 1890ರಲ್ಲೇ ಈತ ಕೇಪ್ ವಸಾಹತಿನ ಪ್ರಧಾನಿಯಾದ. ಬ್ರಿಟಿಷ್ ಪ್ರಭುತ್ವ ವಿಸ್ತರಣೆಯೇ ಅವನ ಜೀವಿತದ ಮುಖ್ಯ ಗುರಿಯಾಗಿತ್ತು. ಬ್ರಿಟಿಷ್ ಪ್ರಭುತ್ವದಲ್ಲಿ ದಕ್ಷಿಣ ಆಫ್ರಿಕದಲ್ಲಿ ಬೋಯರ್ ಜನರೂ ಬ್ರಿಟಿಷ್ ಪ್ರಜೆಗಳೂ ವಾಸಿಸಬೇಕೆಂಬುದು ಅವನ ಹೆಬ್ಬಯಕೆಯಾಗಿತ್ತು.

	1886ರಲ್ಲಿ ಟ್ರಾನ್ಸವಾಲಿನ ಜೋಹಾನಸ್‍ಬರ್ಗಿನಲ್ಲಿ ಚಿನ್ನದ ನಿಕ್ಷೇಪಗಳು ಪತ್ತೆಯಾದುವು. ಅಲ್ಲಿ ನೆಲಸಲು ವಿದೇಶೀಯರು ಅಧಿಕ ಸಂಖ್ಯೆಯಲ್ಲಿ ಬರಲಾರಂಭಿಸಿದರು. ವಿದೇಶೀಯರ ಸಂಖ್ಯೆ ಹೆಚ್ಚಿದಂತೆಲ್ಲ ಬೋಯರ್ ಜನರ ಭೀತಿಯೂ ಬೆಳೆಯಿತು. ಟ್ರಾನ್ಸ್‍ವಾಲ್ ಸರ್ಕಾರ ವಿದೇಶೀಯರ ವಶವಾಗಬಹುದೆಂಬ ಶಂಕೆ ಬೋಯರ್ ಜನರಲ್ಲಿ ಮೂಡಿತು. ಬೋಯರ್ ಸರ್ಕಾರ ವಿದೇಶೀಯರಿಗೆ ಎಲ್ಲ ರಾಜಕೀಯ ಹಕ್ಕುಬಾಧ್ಯತೆಗಳನ್ನೂ ನಿರಾಕರಿಸಿತು. ತಾವು ಹೆಚ್ಚಿನ ತೆರಿಗೆಯನ್ನು ಸರ್ಕಾರಕ್ಕೆ ಸಲ್ಲಿಸುತ್ತಿರುವುದರಿಂದ ಪೌರ ಹಕ್ಕುಗಳನ್ನು ತಮಗೆ ನೀಡಬೇಕೆಂದು ವಿದೇಶೀಯರು ವಾದಿಸಿದರು. ಟ್ರಾನ್ಸ್‍ವಾಲಿನ ವಿಧಾನ ಸಭೆಯಲ್ಲಿ ತಮಗೆ ಪ್ರಾತಿನಿಧ್ಯ ದೊರಕಿಸಿಕೊಡಬೇಕೆಂದು ಅಧ್ಯಕ್ಷ ಕ್ರೂಗರನಿಗೆ ವಿದೇಶೀಯರು ವಿನಂತಿಸಿಕೊಂಡರು.

	ವಿದೇಶೀಯರಿಗೆ ಬೋಯರ್ ಸರ್ಕಾರ ಪೌರ ಹಕ್ಕುಗಳನ್ನು ನಿರಾಕರಿಸಿದ್ದರಿಂದ ಗಂಭೀರ ಪರಿಸ್ಥಿತಿ ಉಂಟಾಯಿತು. ವಿದೇಶೀಯರು ಬೋಯರ್ ಸರ್ಕಾರದ ವಿರುದ್ಧ ದಂಗೆ ಏಳಲು ಸಿದ್ಧರಾಗಿದ್ದರಲ್ಲದೆ ಬ್ರಿಟಿಷರ ಸಹಾಯ ಕೋರಿದರು. ಕೇಪ್ ಕಾಲೊನಿಯ ಪ್ರಧಾನಿ ಸಿಸಿಲ್ ರೋಡ್ಸ್ ವಿದೇಶೀಯರ ಪಕ್ಷ ವಹಿಸಿದನಲ್ಲದೆ, ಈ ಅವಕಾಶವನ್ನು ಉಪಯೋಗಿಸಿಕೊಂಡು ಬೋಯರ್ ಸರ್ಕಾರವನ್ನು ಉರುಳಿಸಲು ಯೋಚಿಸಿದ. ಅಲ್ಲದೆ ವಿದೇಶೀ ದಂಗೆಕೋರರಿಗೆ ಯುದ್ಧ ಸಾಮಗ್ರಿಗಳನ್ನು ಒದಗಿಸಲು ಒಪ್ಪಿಕೊಂಡ. ತನ್ನ ಮಿತ್ರ ಜೇಮ್ಸನನ (ದಕ್ಷಿಣ ಆಫ್ರಿಕ ಕಂಪನಿಯ ಅಧೀನದಲ್ಲಿದ್ದ ಪ್ರದೇಶಗಳ ಆಡಳಿತಾಧಿಕಾರಿ) ನಾಯಕತ್ವದಲ್ಲಿ 1,500 ಸೈನಿಕರನ್ನು ಕಳುಹಿಸುವುದಾಗಿ ದಾಳಿಕಾರರಿಗೆ ಭರವಸೆ ನೀಡಿದ.

	ಜೇಮ್ಸನ್ ಆತುರದಿಂದ ವರ್ತಿಸಿದ. ವಿದೇಶೀಯರು ಬೋಯರ್ ಸರ್ಕಾರದ ವಿರುದ್ಧ ದಂಗೆ ಏಳುವುದಕ್ಕೆ ಮುಂಚೆಯೇ ಜೇಮ್ಸ್ 1896ರ ಡಿಸೆಂಬರ್ 29ರಂದು ಸುಮಾರು 600 ಸೈನಿಕರೊಡನೆ ಟ್ರಾನ್ಸ್‍ವಾಲಿನ ಮೇಲೆ ನುಗ್ಗಿದ. ದಾಳಿಯ ಸುಳಿವನ್ನು ತಿಳಿದಿದ್ದ ಬೋಯರ್ ಸೈನಿಕರು ಜೇಮ್ಸನನನ್ನು ಕ್ರೂಗರ್ಸ್‍ಡಾರ್ಫ್‍ನಲ್ಲಿ ಸುಲಭವಾಗಿ ಸೋಲಸಿದರು. ಜೇಮ್ಸನ್ ತನ್ನ ಅನುಯಾಯಿಗಳೊಡನೆ ಬೋಯರ್ ಸೈನಿಕರಿಗೆ ಶರಣಾಗತನಾದ. ಜೇಮ್ಸನನ್ನು ಬಂಧಿಸಿದ್ಧ ಬೋಯರ್ ಸರ್ಕಾರ ವಿಚಾರಣೆಗಾಗಿ ಅವನನ್ನು ಬ್ರಿಟಿಷ್ ಸರ್ಕಾರಕ್ಕೆ ಒಪ್ಪಿಸಿತು. ಪ್ರಧಾನಿ ಸಿಸಿಲ್ ರೋಡ್ಸ್ ರಾಜೀನಾಮೆ ನೀಡಬೇಕಾಯಿತು. ಯೂರೋಪಿನ ಅನೇಕ ರಾಷ್ಟ್ರಗಳು ಈ ಘಟನೆಗಾಗಿ ಬ್ರಿಟಿಷ್ ಸರ್ಕಾರವನ್ನು ತೀವ್ರವಾಗಿ ಖಂಡಿಸಿದುವು. ಜರ್ಮನಿಯ ದೊರೆ ಎರಡನೆಯ ವಿಲಿಯಂ, ಜೇಮ್ಸನನ ದಾಳಿಯನ್ನು ಅಡಗಿಸಿದ್ದಕ್ಕಾಗಿ ಟ್ರಾನ್ಸ್‍ವಾಲಿನ ಅಧ್ಯಕ್ಷ ಪಾಲ್ ಕ್ರೂಗರನಿಗೆ ಅಭಿನಂದನೆ ತಂತಿಯೊಂದನ್ನು ಕಳುಹಿಸಿದ.

	ಎರಡನೆಯ ಯುದ್ಧ: ವಿಫಲಗೊಂಡ ಜೇಮ್ಸನನ ದಾಳಿಯಿಂದಾಗಿ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿತು; 1897ರಲ್ಲಿ ವಿದೇಶೀಯರು ತಮಗಾಗಿದ್ದ ಅನ್ಯಾಯವನ್ನು ಸರಿಪಡಿಸುವಂತೆ ಮತ್ತೆ ಬ್ರಿಟಿಷ್ ಸರ್ಕಾರವನ್ನು ಕೋರಿದರು. ದಕ್ಷಿಣ ಆಫ್ರಿಕದ ಬ್ರಿಟಿಷ್ ಕಮಿಶನರ್ ಲಾರ್ಡ್ ಮಿಲ್ನರ್ ಮತ್ತು ಇಂಗ್ಲೆಂಡಿನ ವಸಾಹತು ಕಾರ್ಯದರ್ಶಿ ಜೋಸೆಫ್ ಚೇಂಬರ್‍ಲೇನ್ ವಿದೇಶೀಯರ ಪರವಾಗಿದ್ದರು. ಬೋಯರ್ ಸರ್ಕಾರವನ್ನು ಉರುಳಿಸುವುದೇ ಬ್ರಿಟಿಷರ ನೀತಿ ಎಂದು ಭಾವಿಸಿದ್ದ ಪಾಲ್ ಕ್ರೂಗರ್ ಫ್ರಾನ್ಸ್ ಮತ್ತು ಜರ್ಮನಿಗಳ ಸಹಾಯದಿಂದ ತನ್ನ ಸೈನಿಕ ಶಕ್ತಿಯನ್ನು ಬಲಪಡಿಸಿಕೊಂಡ.

	ಅದೇ ವೇಳೆಗೆ ಲಾರ್ಡ್ ಮಿಲ್ನರನಿಗೂ ಪಾಲ್ ಕ್ರೂಗರನಿಗೂ ಶಾಂತಿ ಮಾತುಕತೆಗಳು ಆರಂಭವಾದುವು. ಟ್ರಾನ್ಸ್‍ವಾಲಿನಲ್ಲಿ ಐದು ವರ್ಷಗಳಿಂದಲೂ ವಾಸಿಸುತ್ತಿರುವ ವಿದೇಶೀಯರಿಗೆ ಮತದಾನದ ಹಕ್ಕನ್ನು ನೀಡಬೇಕೆಂದು ಲಾರ್ಡ್ ಮಿಲ್ನರ್ ಕ್ರೂಗರನನ್ನು ಒತ್ತಾಯಪಡಿಸಿದ. ಕ್ರೂಗರ್ ಬ್ರಿಟನ್ನಿನ ವಾದವನ್ನು ಒಪ್ಪಿಕೊಳ್ಳದಿದ್ದುದರಿಂದ ಶಾಂತಿ ಮಾತುಕತೆಗಳು ಮುರಿದು ಬಿದ್ದುವು. ಬ್ರಿಟಿಷರನ್ನು ದಕ್ಷಿಣ ಆಫ್ರಿಕದಿಂದ ಹೊರದೂಡಿ ಬೋಯರ್ ಸಾಮ್ರಾಜ್ಯವನ್ನು ಬಲಪಡಿಸಲು ಕ್ರೂಗರ್ ಪ್ರಯತ್ನಿಸುತ್ತಿದ್ದಾನೆಂದು ತಿಳಿದ ಬ್ರಿಟಿಷ್ ಸರ್ಕಾರ ತನ್ನ ಸೈನಿಕ ಶಕ್ತಿಯನ್ನು ಹೆಚ್ಚಿಸಿಕೊಂಡಿತು. ಬ್ರಿಟಿಷರೊಡನೆ ಸಂಧಾನ ಸಾಧ್ಯವಿಲ್ಲವೆಂದು ತಿಳಿದ ಕ್ರೂಗರ್ 1899ರ ಅಕ್ಟೋಬರ್ 9ರಂದು ಬ್ರಿಟಿಷ್ ಸರ್ಕಾರಕ್ಕೆ ಅಂತಿಮ ಎಚ್ಚರಿಕೆ ನೀಡಿದ. ಕ್ರೂಗರನ ಎಚ್ಚರಿಕೆಯನ್ನು ಬ್ರಿಟಷ್ ಸರ್ಕಾರ ತಿರಸ್ಕರಿಸಿದ್ದರಿಂದ ಅಕ್ಟೋಬರ್ 11ರಂದು ಬೋಯರ್ ರಾಜ್ಯಗಳು ನಟಾಲ್ ಮತ್ತು ಕೇಪ್ ಕಾಲೊನಿಯ ಮೇಲೆ ದಾಳಿ ನಡೆಸಿದವು.

	ಬ್ರಿಟಿಷರಿಗೂ ಬೋಯರ್ ಗಣರಾಜ್ಯಗಳಿಗೂ 1899ರಲ್ಲಿ ಆರಂಭವಾದ ಯುದ್ಧ ಮೂರು ಹಂತಗಳಲ್ಲಿ ನಡೆಯಿತು. 1. 1899-1900: ಬ್ರಿಟಿಷ್ ಸೈನ್ಯಾಧಿಕಾರಿ ಬುಲರನ ಸೋಲು: 2. 1900ರ ನವೆಂಬರ್‍ನಲ್ಲಿ ಬೋಯರ್ ಸೈನ್ಯವನ್ನು ಬ್ರಿಟಿಷ್ ಮಿಲಿಟರಿ ಅಧಿಕಾರಿ ರಾಬಟ್ಸ್ ಸೋಲಿಸಿ, ಲೇಟಿ ಸ್ಮಿತ್ ಪಟ್ಟಣದ ಮೇಲಿನ ಮುತ್ತಿಗೆಯನ್ನು ಅಂತ್ಯಗೊಳಿಸಿದ್ದು. 3. 1900-1902ರಲ್ಲಿ ಲಾರ್ಡ್ ಕಿಚ್‍ನರ್ ದಕ್ಷಿಣ ಆಫ್ರಿಕ ಯುದ್ಧವನ್ನು ಕೊನೆಗೊಳಿಸಿದ್ದು: 1899ರಲ್ಲಿ ಬ್ರಿಟಿಷರು ಸಿದ್ಧತೆಗಳನ್ನು ಮಾಡಿಕೊಳ್ಳುವ ಮುನ್ನವೇ ಯುದ್ಧ ಆರಂಭವಾದ್ದರಿಂದ, ಮೊದಮೊದಲು ಬ್ರಿಟಿಷ್ ಸೈನ್ಯಗಳು ಸೋಲಿನ ಮೇಲೆ ಸೋಲನ್ನು ಅನುಭವಿಸಬೇಕಾಯಿತು. ಬ್ರಿಟಿಷ್ ಸೈನ್ಯದ ವಿರುದ್ಧ ಪಡೆದ ಜಯದಿಂದ ಉತ್ತೇಜಿತರಾದ ಬೋಯರ್ ಸೈನಿಕರು ಲೇಡಿ ಸ್ಮಿತ್, ಕಿಂಬರ್ಲಿ ಮತ್ತು ಮಫೆಕಿಂಗ್ ಪಟ್ಟಣಗಳನ್ನು ಸುತ್ತುವರಿದರು. ಮತ್ತೆ ಬ್ರಿಟಿಷ್ ಪಡೆಗಳನ್ನು ಸದೆಬಡಿದರು. ಬೋಯರ್ ಸೈನ್ಯಗಳು ಪ್ರಚಂಡ ಜಯ ಪಡೆದವು.

	1899ರ ಡಿಸೆಂಬರ್ ತಿಂಗಳಲ್ಲಿ ರೆಡ್‍ವರ್ಸ್, ಬುಲರ್ ಮುಂತಾದ ಅನುಭವಿ ಬ್ರಿಟಿಷ್ ಸೈನ್ಯಾಧಿಕಾರಿಗಳಿಗೆ ಉಂಟಾದ ಸೋಲು ಬ್ರಿಟಿಷ್ ಸರ್ಕಾರದ ಕಣ್ಣು ತೆರೆಯಿಸಿತು. ಕೂಡಲೆ ಬ್ರಿಟಿಷ್ ಸರ್ಕಾರ ಹೆಚ್ಚು ಸಮರ್ಥವಾದ ಸೈನ್ಯವನ್ನು ದಕ್ಷಿಣ ಆಫ್ರಿಕಕ್ಕೆ ರವಾನಿಸಿತು. ಅಲ್ಲದೆ ಕೆನಡ, ಆಸ್ಟ್ರೇಲಿಯ, ನ್ಯೂಜಿûೀಲೆಂಡ್‍ಗಳಿಂದಲೂ ವಸಾಹತು ಸೈನ್ಯಗಳನ್ನು ಬ್ರಿಟಿಷರ ನೆರವಿಗಾಗಿ ಕರೆಸಿಕೊಳ್ಳಲಾಯಿತು. ಲಾರ್ಡ್ ರಾಬಟ್ರ್ಸ್, ಮತ್ತು ಲಾರ್ಡ್ ಕಿಚ್‍ನರ್ ಬ್ರಿಟಿಷ್ ಸೈನ್ಯದ ನಾಯಕತ್ತ್ವ ವಹಿಸಿದರು.

	ಲಾರ್ಡ್ ರಾಬಟ್ರ್ಸ್ ಮತ್ತು ಲಾರ್ಡ್ ಕಿಚ್‍ನರ್ ಅನುಸರಿಸಿದ ಬಿರುಸಿನ ಆಕ್ರಮಣ ನೀತಿಯಿಂದಾಗಿ ಬ್ರಿಟಿಷ್ ಪಡೆಗಳು ವಿಜಯ ಗಳಿಸಿದವು. ಆರೆಂಜ್ ಫ್ರೀ ಸ್ಟೇಟನಲ್ಲಿ ಕ್ರಾಂಜಿಯ ನೇತೃತ್ವದಲ್ಲಿ ಹೋರಾಡುತ್ತಿದ್ದ ಬೋಯರ್ ಸೈನ್ಯ, ಪಾರ್‍ಡೆಬರ್ಗ್ ಎಂಬಲ್ಲಿ ಸೋತು 1900ರ ಫೆಬ್ರವರಿ 28ರಂದು ಬ್ರಿಟಿಷರಿಗೆ ಶರಣಾಗತವಾಯಿತು. ಕಿಂಬರ್ಲಿ ಮತ್ತು ಲೇಡಿ ಸ್ಮಿತ್ ಪಟ್ಟಣಗಳು ಬೋಯರ್ ಪಡೆಗಳ ಮುತ್ತಿಗೆಯಿಂದ ಪಾರಾದವು. ಟ್ರಾನ್ಸ್‍ವಾಲಿನ ಪ್ರಿಟೋರಿಯ ಮತ್ತು ಜೊಹಾನಸ್‍ಬರ್ಗ್ ನಗರಗಳು ಬ್ರಿಟಿಷರ ವಶವಾದುವು. ಆರೆಂಜ್ ಫ್ರೀ ಸ್ಟೇಟ್ ಮತ್ತು ಟ್ರಾನ್ಸ್‍ವಾಲ್‍ಗಳನ್ನು 1900ರಲ್ಲಿ ಬ್ರಿಟಷರು ತಮ್ಮ ವಶಕ್ಕೆ ತೆಗೆದುಕೊಂಡರು. ಬ್ರಿಟಿಷರು ಗಳಿಸಿದ ನಿರ್ಣಾಯಕ ಜಯದಿಂದ ಕಂಗೆಟ್ಟ ಪಾಲ್‍ಕ್ರೂಗರ್ ಯೂರೋಪಿಗೆ ಓಡಿಹೋದ.

	ಅವಮಾನಕರವಾದ ಭಾರಿ ಸೋಲನ್ನು ಅನುಭವಿಸಿದ ಬೋಯರ್ ಜನ ಗೆರಿಲ ಯುದ್ಧ ತಂತ್ರವನ್ನು ಅನುಸರಿಸಿ ಬ್ರಿಟಿಷರ ವಿರುದ್ಧ ಹೋರಾಟ ಮುಂದುವರಿಸಿದರು. ಅಲ್ಲಲ್ಲಿ ಬ್ರಿಟಿಷ್ ಸೈನಿಕರ ಮೇಲೆರಗಿ ಅವರಿಗೆ ಸಾವುನೋವುಗಳನ್ನುಂಟುಮಾಡಿದರು. ಆದರೆ ಅವರಿಗೆ ಯಶಸ್ಸು ದೊರಕಲಿಲ್ಲ. ಲಾರ್ಡ್ ಕಿಚ್‍ನರ್ ಬೋಯರ್ ಜನರ ಜಮೀನುಗಳನ್ನು ನಾಶಗೊಳಿಸಿ, ಅವರ ಹೆಂಗಸರು ಮಕ್ಕಳನ್ನು ಮರದ ದಿಮ್ಮಿಗಳಿಂದ ನಿರ್ಮಿಸಿದ ಪ್ರತ್ಯೇಕ ಮನೆಗಳಲ್ಲಿ ಕೂಡಿಹಾಕಿ ಚಿತ್ರಹಿಂಸೆಗೆ ಗುರಿಪಡಿಸಿದ. ಯೂರೋಪಿನ ರಾಷ್ಟ್ರಗಳಿಂದ ನಿರೀಕ್ಷಿಸಿದ್ದ ಸಹಾಯ ದೊರಕದಿದುದ್ದರಿಂದಲೂ ತಮ್ಮ ಶಕ್ತಿಸಾಮಥ್ರ್ಯ ಉಡುಗಿದ್ದರಿಂದಲೂ ಬೋಯರ್ ಜನ ತಮ್ಮ ಸ್ವಾತಂತ್ರ್ಯ ಹೋರಾಟವನ್ನು ಮುಂದುವರಿಸಲಾರದೆ ಹೋದರು. 

	ಕೊನೆಗೆ ಬ್ರಿಟಿಷರಿಗೂ ಬೋಯರ್ ಜನರಿಗೂ 1902ರ ಮೇ 31 ರಂದು ಶಾಂತಿ ಒಪ್ಪಂದವಾಯಿತು. ಬೋಯರ್ ರಾಜ್ಯಗಳು ಬ್ರಿಟಿಷ್ ಪ್ರಭುತ್ವವನ್ನು ಒಪ್ಪಿಕೊಳ್ಳಬೇಕಾಯಿತು. ಬ್ರಿಟಿಷ್ ಸರ್ಕಾರ ಬೋಯರ್ ಜನರಿಗೆ ಹೆಚ್ಚು ರಾಜಕೀಯ ಹಕ್ಕುಗಳನ್ನೂ ಆದಷ್ಟು ಬೇಗ ಸ್ವಯಮಾಡಳಿತವನ್ನೂ ನೀಡಲು ಒಪ್ಪಿಕೊಂಡಿತು. ನಾಶಗೊಂಡ ಬೋಯರ್ ಜಮೀನುಗಳನ್ನು ದುರಸ್ತಿಗೊಳಿಸಲು ಬೋಯರ್ ಜನರಿಗೆ ಬ್ರಿಟಿಷ್ ಸರ್ಕಾರ ಹಣದ ಸಹಾಯ ನೀಡಿತು. ಶಾಲೆ ಮತ್ತು ನ್ಯಾಯಾಲಯಗಳಲ್ಲಿ ಇಂಗ್ಲಿಷ್ ಮತ್ತು ಡಚ್ ಭಾಷೆಗಳ ಬಳಕೆಗೆ ಬ್ರಿಟನ್ ಒಪ್ಪಿಗೆ ನೀಡಿತು.

	ಬೋಯರ್ ಜನತೆಗೆ ಕೊಟ್ಟ ಭರವಸೆಗಳನ್ನು ಬ್ರಿಟಿಷ್ ಸರ್ಕಾರ ಪೂರ್ಣಗೊಳಿಸಿತು. ಟ್ರಾನ್ಸ್‍ವಾಲ್ 1906 ರಲ್ಲೂ ಆರೆಂಜ್ ಫ್ರೀ ಸ್ಟೇಟ್ 1907 ರಲ್ಲೂ ಸ್ವಯಮಾಡಳಿತ ಪಡೆಯಿತು. ಮುಂದೆ 1910 ರಲ್ಲಿ ಎಲ್ಲ ರಾಜ್ಯಗಳನ್ನೂ (ಕೇಪ್ ಕಾಲೊನಿ, ನಟಾಲ್, ಆರೆಂಜ್ ಫ್ರೀ ಸ್ಟೇಟ್, ಟ್ರಾನ್ಸ್‍ವಾಲ್) ಸೇರಿಸಿ ದಕ್ಷಿಣ ಆಫ್ರಿಕ ಒಕ್ಕೂಟವನ್ನು ರಚಿಸಲಾಯಿತು.		
(ಜಿ.ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ